ಜಿನ
	ಜಿನ ಎಂದರೆ ಗೆಲ್ಲುವವ ಎಂದರ್ಥ. ಯಾರು ತಮ್ಮ ಕರ್ಮಗಳನ್ನು ಗೆಲ್ಲುವರೋ ಅವರು ಜಿನರಾಗುವರು, ಪರಮಾತ್ಮರಾಗುವರು. ಮಾನವ ತನ್ನ ಸ್ವಂತ ತಪೋಬಲದಿಂದ ಜ್ಞಾನಾವರಣೀಯ ಮೊದಲಾದ ಎಂಟು ಕರ್ಮಗಳನ್ನು ಗೆದ್ದಲ್ಲಿ ಜಿನನಾಗುತ್ತಾನೆ. ಜಿನ ಸೃಷ್ಟಿಕರ್ತನಾದ ಈಶ್ವರನಲ್ಲ. ಪ್ರತಿಯೊಂದು ಪ್ರಾಣಿಗೂ ಜಿನನಾಗುವುದು ಸಾಧ್ಯವಿದೆ. ಜಿನನಾದ ಮೇಲೆ ಪ್ರತಿಯೊಂದು ಜೀವಿಯೂ ಸರ್ವಜ್ಞನಾಗುವುದು, ವೀತರಾಗನೆನಿಸುವುದು. ಈ ಅವಸ್ಥೆಯಲ್ಲಿ ಉಪದೇಶಿಸಿದ ಧರ್ಮ ಯಾವಾಗಲೂ ಪ್ರಾಮಾಣಿಕವಾಗಿರುವುದು. ಅಜ್ಞಾನ, ರಾಗ-ದ್ವೇಷಗಳು ಅಪ್ರಾಮಾಣಿಕತೆಗೆ ಕಾರಣವಾಗುತ್ತವೆ. ವ್ಯಕ್ತಿ ಅಜ್ಞಾನದಿಂದ ಅಸತ್ಯ ನುಡಿಯುತ್ತಾನೆ. ಇಲ್ಲವೆ, ವಿಷಯದ ವಿಷಯಕ್ಕೆ ಇರುವ ರಾಗ-ದ್ವೇಷಭಾವನೆಗಳು ಜ್ಞಾನಿಯಿಂದಲೂ ಅಸತ್ಯವನ್ನು ನುಡಿಸುತ್ತವೆ. ಈ ಎರಡು ದೋಷಗಳನ್ನೂ ಅಳಿದವ ಜಿನನೆನಿಸುತ್ತಾನೆ. ಜಿನನ ಸ್ಯಾದ್ವಾದ ದೃಷ್ಟಿ ಅವನ ಸತ್ಯವಾದತ್ವಕ್ಕೆ ಒಂದು ಪ್ರಬಲ ಪ್ರಮಾಣವಾಗಿದೆ. ಅದು ವಸ್ತುವಿನ ಪೂರ್ಣ ಇಲ್ಲವೆ ಅಪೂರ್ಣ ಆದರೆ ಸತ್ಯದ ದರ್ಶನಮಾಡುವ ಎಲ್ಲ ವ್ಯಕ್ತಿಗಳ ವಿಚಾರಗಳ ಸಮನ್ವಯ ಮಾಡುತ್ತದೆ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದು, ಎಲ್ಲ ಜೀವಿಗಳನ್ನೂ ರಕ್ಷಿಸುವುದು-ಇದೇ ಜಿನನ ಉಪದೇಶ ಮೂಲವಾಗಿದೆ. ಅದರಿಂದ ಜಿನನಿಗೆ ಹಿತೋಪದೇಶಿ ಎಂದು ಹೆಸರಿದೆ. ಜಿನನ ಸ್ತರಕ್ಕೇರಿದವರಿಗೆ ಅನಂತಜ್ಞಾನ, ದರ್ಶನ, ವೀರ್ಯ, ಸುಖಗಳು ಪ್ರಾಪ್ತವಾಗುವವು. ಅವರಲ್ಲಿ ಕ್ಷುಧೆ, ತೃಷೆ, ಭಯ, ದ್ವೇಷ, ರಾಗ, ಮೋಹ, ಚಿಂತೆ, ಜರೆ, ರೋಗ, ಮೃತ್ಯು, ಖೇದ, ಸ್ವೇದ, ಮದ, ಅರತಿ, ವಿಸ್ಮಯ, ಜನ್ಮ, ನಿದ್ರೆ , ವಿಷಾದ ಎಂಬ ಹದಿನೆಂಟು ದೋಷಗಳು ಇರುವುದಿಲ್ಲ. 						(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ